ಪರಮಶ್ರೇಯಸ್ -
	ಮಾನವನಿಗೆ ಅತಿ ಹೆಚ್ಚಿನ ಶ್ರೇಯಸ್ಸು ಯಾವುದೋ ಅದೇ ಪರಮ ಶ್ರೇಯಸ್ಸು. ಭಾರತೀಯ ದರ್ಶನಗಳೆಲ್ಲ ಮಾನವನ ಸರ್ವೋಚ್ಛ ಲಕ್ಷ್ಯವಾದ ನಿಃಶ್ರೇಯಸ ಅಥವಾ ಮೋಕ್ಷವೇ ಅದೆಂದು ಹೇಳಿವೆ. ಕೈವಲ್ಯ, ನಿರ್ವಾಣ, ಪರಮಜ್ಞಾನ, ಮುಕ್ತಿ ಮುಂತಾದವು ಅದರ ನಾಮಾಂತರಗಳೆನ್ನಬಹುದು. ಅಜ್ಞಾನದ ನಾಶದಿಂದ ಮೋಕ್ಷ ಸಾಕ್ಷಾತ್ಕಾರವೆಂಬುದನ್ನು ಹೆಚ್ಚಾಗಿ ಎಲ್ಲರೂ ಒಪ್ಪುತ್ತಾರೆ. ಅದರೆ ಸಾಧನೆಗೆ ತತ್ತ್ವಜ್ಞಾನ ಎಲ್ಲಕ್ಕಿಂತಲೂ ಹೆಚ್ಚಿನ ಸಾಧಕವೆಂಬುದು ಕೂಡ ಷಡ್ದರ್ಶನಗಳಿಗೂ ಸಮಾನವಾದ ಕಲ್ಪನೆಯೆನ್ನಬಹುದು. ಧರ್ಮ, ಅರ್ಥ, ಕಾಮ, ಮೋಕ್ಷ ಎಂಬುದಾಗಿ ಪುರುಷಾರ್ಥಗಳು ನಾಲ್ಕೆಂದರೂ ಮಿಕ್ಕ ಮೂರು ಪುರುಷಾರ್ಥಗಳಿಗಿಂತ ಪರಮಪುರುಷಾರ್ಥವಾದ ಮೋಕ್ಷವೇ ಹೆಚ್ಚಿನದೆಂದು ದಾರ್ಶನಿಕರ ಸಿದ್ದಾಂತ. ಉಪನಿಷತ್ತು, ಗೀತೆ, ಬ್ರಹ್ಮಸೂತ್ರ- ಇತ್ಯಾದಿ ವೇದಾಂತ ಪ್ರಸ್ಥಾನ ಗ್ರಂಥಗಳಲ್ಲೆಲ್ಲ ಮೋಕ್ಷಸಾಧನ ಸಾಮಗ್ರಿಗಳ ವಿವೇಚನೆಯೇ ಹೆಚ್ಚಾಗಿ ಬರತ್ತದೆ. ಅಲ್ಲೆಲ್ಲ ಭಕ್ತಿ ಅಥವಾ ಉಪಾಸನೆ, ಸತ್ಕರ್ಮಾನುಷ್ಠಾನ ಮತ್ತು ಆಧ್ಯಾತ್ಮಿಕ ತತ್ತ್ವಜ್ಞಾನಗಳ ವಿಸ್ತøತ ವಿವರಣೆಯನ್ನು ಕಾಣಬಹುದು. ವೈದಿಕ ಮಾರ್ಗವನ್ನೊಲ್ಲದ ಬೌದ್ಧ ಜೈನಾದಿ ಶಾಸ್ತ್ರಕಾರರು ಕೂಡ ಮೋಕ್ಷದ ಪರಮ ಪುರುಷಾರ್ಥವನ್ನು ಅಲ್ಲಗಳೆಯುವುದಿಲ್ಲ. ಧರ್ಮಗಳು ಬೇರೆಬೇರೆಯಾದಂತೆ ಪರಮ ಶ್ರೇಯಸ್ಸಿನ ಪ್ರಾಪ್ತಿಗೆ ಬೇರೆ ಬೇರೆ ವಿವರಗಳನ್ನೊಳಗೊಂಡ ಆಚಾರಸಂಹಿತೆ ಏರ್ಪಟ್ಟಿರುವುದನ್ನು ಕಾಣುತ್ತೇವೆ. ಚಾರ್ವಾಕರು ಕೂಡ ಐಹಿಕ ಇಂದ್ರಿಯ ಸುಖವನ್ನೇ ಪರಮಶ್ರೇಯಸ್ಸೆಂದು ವಾದಿಸುತ್ತಾರೆ. ಹೀಗೆ ಧರ್ಮಗಳ ಜಿಜ್ಞಾಸೆ, ನೀತಿಶಾಸ್ತ್ರ, ಪರಾತತ್ತ್ವಶಾಸ್ತ್ರಗಳಲ್ಲೆಲ್ಲ ಪರಮ ಶ್ರೇಯಸ್ಸಿನ ವಿವೇಚನೆ ಕ್ರಮ ಪ್ರಾಪ್ತವಾಗುತ್ತದೆ.

	ಪಾಶ್ಚಾತ್ಯ ದಾರ್ಶನಿಕರಲ್ಲಿ ಕೂಡ ಶ್ರೇಯಸ್ಸಿನ ವಿವೇಚನೆಗಾಗಿ ಹಲವರು ಶ್ರಮ ಪಟ್ಟಿದ್ದಾರೆ. ಅರಿಸ್ಟಾಟಲ್ ಮೌಲಿಕ ಶ್ರೇಯಗಳಿಗೂ ಅಮೌಲಿಕ ಶ್ರೇಯಗಳಿಗೂ ಇರುವ ಅಂತರವನ್ನು ಮೊದಲು ತಿಳಿಸಿಕೊಟ್ಟ. ಅನ್ಯನಿರಪೇಕ್ಷವಾಗಿ ಯಾವುದು ಶ್ರೇಯವೊ ಅದು ಮೌಲಿಕ ; ಅನ್ಯಾಶ್ರಿತವಾಗಿ ಯಾವುದು ಶ್ರೇಯವೋ ಅದು ಅಮೌಲಿಕ. ಅಮೌಲಿಕವಾದರೂ ಅದು ಸಾಧಕಶ್ರೇಯವಾಗಬಹುದು. ಆರೋಗ್ಯವನ್ನು ಒಂದು ಮೌಲಿಕ ಶ್ರೇಯವೆಂದರೆ, ವೈದ್ಯಕೀಯ ಚಿಕಿತ್ಸೆ ಸಾಧಕ ಅಥವಾ ಔಪಯಿಕ ಶ್ರೇಯ. ಒಂದು ಸಂಗೀತ ಶ್ರುತಿಯ ರಾಗಕ್ಕೆ ಪೋಷಕವಾದ ಭಿನ್ನ ಸ್ವರಗಳು ಸಹಾಯಕ ಶ್ರೇಯಗಳೆನ್ನಬಹುದು. ಒಂದು ಸುಂದರ ಸನ್ನಿವೇಶದ ಆಸ್ವಾದನೆ ಮೌಲಿಕ ಶ್ರೇಯವಾದರೆ ಅದರ ಚೆಲುವಿನ ಅಂಗಗಳೆಲ್ಲ ಪೋಷಕ ಶ್ರೇಯಗಳಾಗಬಹುದು. ಹೀಗೆ ಬೇರೆ ಬೇರೆ ಶ್ರೇಯಗಳಿಗೆಲ್ಲ ಒಂದು ಮೌಲಿ ಶ್ರೇಯವೇ ಕೇಂದ್ರಬಿಂದುವಾಗಿರುತ್ತದೆ. ಆದರೆ ಮೌಲಿಕ ಶ್ರೇಯಗಳು ಇಷ್ಟೇ ಎಂದು ನಿರ್ಣಯಿಸಲು ಸರ್ವಾನುಮತವಿರುವ ಪ್ರಕ್ರಿಯೆ ಯಾವುದೂ ಇಲ್ಲ. ಸಾಮಾನ್ಯವಾಗಿ ಪರಮ ಶ್ರೇಯ (ಸಮಮ್ ಬೋನಮ್) ಆತ್ಯಂತಿಕ ಶ್ರೇಯ (ಅಲ್ಟಿಮೇಟ್ ಗುಡ್) ಎಂದು ಮುಂತಾಗಿರುವ ವ್ಯವಹಾರವೆಲ್ಲ ಯಾವುದೋ ಒಂದು ಮೌಲಿಕ ಶ್ರೇಯವನ್ನೇ ಕುರಿತಿರುತ್ತದೆಯೆನ್ನಬಹುದು. ಅಲ್ಲದೆ, ಬೇರೆ ಬೇರೆ ಮೌಲ್ಯಗಳ ಶ್ರೇಣಿಯಿರುವಾಗ ಮಾತ್ರ ಅವುಗಳಲ್ಲಿ ಒಂದು ಪರಮ ಮೌಲ್ಯವೆನಿಸುವುದು ಅರ್ಥಪೂರ್ಣವಾಗುತ್ತದೆ. ಬೌದ್ಧಿಕ ವಿಚಾರಪರತೆಯನ್ನೇ ಅರಿಸ್ಟಾಟಲ್ ಪರಮಶ್ರೇಯವೆನ್ನುವುದು ಹೀಗೆಯೇ ಆಗಿದೆ. ಸೇಂಟ್ ತಾಮಸ್ ಮೋಕ್ಷವನ್ನು ಪರಮಶ್ರೇಯವೆನ್ನುವುದೂ ಅಷ್ಟೇ. ಕೆಲವೊಮ್ಮೆ ಅನೇಕ ಮೌಲಿಕ ಶ್ರೇಯಗಳಲ್ಲಿ ಸಮಾನವಾಗಿ ಕಾಣಬರುವ ಅಂಶಗಳನ್ನು ಕೂಡ ಈ ಶಬ್ದದಿಂದ ನಿರ್ದೇಶಿಸುವುದುಂಟು. ಅರಿಸ್ಟಾಟಲ್ ಸ್ವಭಾವಾನುಗುಣವಾದ ಪ್ರವೃತ್ತಿಗಳ ಬಳಕೆಯನ್ನು ಪರಮಶ್ರೇಯವೆನ್ನುವಾಗ, ಮತ್ತು ಭೋಗವಾದಿಗಳು ಐಹಿಕ ಸುಖವನ್ನು ಪರಮಶ್ರೇಯವೆನ್ನುವಾಗ ಈ ಎರಡನೆಯ ಅರ್ಥವನ್ನು ಕಾಣುತ್ತೇವೆ.

	ಶ್ರೇಯದ ವಿವೇಚಕರಾದ ತತ್ತ್ವಶಾಸ್ತ್ರಕಾರರಲ್ಲಿ ಭಿನ್ನ ವರ್ಗಗಳಿವೆ. ಯಾವುದೇ ಮಾನವ ಪ್ರವೃತ್ತಿಯಾಗಲಿ ಬಾಹ್ಯ ಸನ್ನಿವೇಶವಾಗಲಿ ಒಬ್ಬ ಸಚೇತನನ ಅಂತಃಕರಣದಲ್ಲಿ ಇಷ್ಟತರವೆನಿಸುವ ಮನೋವೃತ್ತಿಯನ್ನುಂಟು ಮಾಡಿದಲ್ಲದೆ ಅದು ಶ್ರೇಯವೆನಿಸದು ಎನ್ನುವವರು ವ್ಯಕ್ತಿಪ್ರಾಧಾನ್ಯವಾದಿಗಳು. ಅಂತಃಕರಣದಲ್ಲಿ ಪ್ರತಿತವಾಗುವ ಮನೋವೃತ್ತಿಗಳಿಗೆ ಮಾತ್ರ ಶ್ರೇಯವೆನ್ನುವುದು ಇವರ ಮಾರ್ಗ. ವ್ಯಕ್ತಿಯ ಮನೋವೃತ್ತಿಗೆ ಸಂಬಂಧವನ್ನು ಕಲ್ಪಿಸದಂತೆಯೇ ಪ್ರವೃತ್ತಿಗಳ ಹಾಗೂ ಸನ್ನಿವೇಶಗಳ ಶ್ರೇಯತ್ವವನ್ನು ಒಪ್ಪತಕ್ಕವರು ವಸ್ತುಪ್ರಾಧಾನ್ಯವಾದಿಗಳು. ತತ್ತ್ವಶಾಸ್ತ್ರದ ಇತಿಹಾಸದಲ್ಲಿ ವ್ಯಕ್ತಿಪ್ರಾಧಾನ್ಯವಾದವೇ ವಸ್ತುಪ್ರಾಧಾನ್ಯವಾದಕ್ಕಿಂತ ಹೆಚ್ಚು ಜನಪ್ರಿಯವಾಗಿದೆ. ಇದಕ್ಕೆ ಪ್ರಮುಖ ಅಪವಾದಗಳೂ ಇಲ್ಲದಿಲ್ಲ : ಶ್ರೇಯವೆಂದರೆ ಅತೀತ ವಿಕಲ್ಪವಿಶೇಷವೆನ್ನುವ ಪ್ಲೇಟೊ ಅಲ್ಲದೆ, ಜನರ ಹಿತಕ್ಕೆ ಉಂಟಾಗುವ ಪರಿಣಾಮವನ್ನು ಎಣಿಸದೆಯೇ ಕೆಲವೊಂದು ನೈತಿಕ ಪ್ರವೃತ್ತಿಗಳನ್ನು ಶ್ರೇಯವೆನ್ನುವ ಆಧುನಿಕ ಚಿಂತಕರು ಸಹ ಅಪವಾದಗಳಾಗಿದ್ದಾರೆ. ಶ್ರೇಯ ನಮಗೆ ಹಿತವಾದ ಅನುಭವವನ್ನು ನೀಡುವುದು ನಿಜವಾದರೂ ಹಿತವಾದ ಅನುಭವವನ್ನು ನೀಡುವುದೆಲ್ಲವೊ ಶ್ರೇಯವಲ್ಲ. ಒಂದು ಚಿತ್ತಶಾಮಕ ಗುಳಿಗೆ ಹಿತವೆನಿಸಿದರೂ ಅದು ಶ್ರೇಯವೆನಿಸಲಾರದು.

	ಪರಮಶ್ರೇಯದ ಚಿಂತಕರಲ್ಲಿ ವಿಶೇಷ ಪ್ರಾಮುಖ್ಯವಿರುವವರ ವಾದಗಳನ್ನಿಲ್ಲಿ ಸಂಗ್ರಹವಾಗಿ ಹೇಳಬಹುದು. ಸಕಲ ಮಾನವರಲ್ಲಿಯೂ ಒಂದು ಸಾಧಾರಣವಾದ ಸತ್ತ್ವಸಾರ ಅಥವಾ ಸ್ವಭಾವವುಂಟೆಂದು ಅರಿಸ್ಟಾಟಲ್ ಮತ್ತು ತಾಮಸ್ ಏಕ್ವಿನಾಸ್ ತಿಳಿಸುತ್ತಾರೆ ; ಮನುಷ್ಯ ಸಾರರೂಪದಲ್ಲಿ ವಿವೇಚನಾಶೀಲ ಎಂಬುದು ಅರಿಸ್ಟಾಟಲನ ಭಾವನೆ ; ಮಾನವನ್ನು ಪ್ರಾಣಿಗಳಿಂದ ಪ್ರತ್ಯೇಕಿಸುವ ವೈಶಿಷ್ಟ್ಯ ಇದೇ. ಆದ್ದರಿಂದ ಪರಮ ಶ್ರೇಯವೆಂಬುದು ಈ ಸಾರಭೂತವಾದ ವೈಶಿಷ್ಟ್ಯವನ್ನು ಬೆಳಸಿಕೊಳ್ಳುವುದೇ ಆಗಿರಬೇಕು ; ಎಂದರೆ ವಿವೇಚನಾ ಶಕ್ತಿಯ ಅಭಿವ್ಯಕ್ತಿ ಅಥವಾ ವಿಚಾರಪರತೆಯೇ ಪರಮ ಶ್ರೇಯವೆಂದಾಗುತ್ತದೆ. ತಾಮಸ್‍ನ ಅನುಯಾಯಿಗಳ ವಿಚಾರದಂತೆ ಭಗವಂತ ಸೃಷ್ಟಿಸಿರುವ ಮಾನವರೆಲ್ಲೆಲ್ಲ ಮೋಕ್ಷಪ್ರಾಪ್ತಿಯ ಬಗೆಗೆ ಒಂದು ಸಹಜ ಪ್ರವೃತ್ತಿಯಿದೆ. ಈ ಪ್ರವೃತ್ತಿ ಗುಪ್ತವಾಗಿರಬಹುದು. ವಿಪರ್ಯಸ್ತವಾಗಬಹುದು. ಆದರೆ ಅಸ್ತವಾಗಲಾರದು. ದೇವರು ನಮ್ಮನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆದುಕೊಳ್ಳುತ್ತಾನೆ. ಈ ಆಕರ್ಷಣೆಯನ್ನು ವಿರೋಧಿಸುವುದೆಂದರೆ ನಮ್ಮ ಪ್ರವೃತ್ತಿಗೆ ವಿರುದ್ಧವಾಗಿ ಹೋದಂತೆಯ ಸರಿ. ದೇವರತ್ತಣ ಆಕರ್ಷಣೆಗೆ ನಮ್ಮನ್ನ ನಾವು ಒಳಪಡಿಸಿ ಕೊಳ್ಳುವುದರಿಂದ ನಮ್ಮ ಸ್ವಭಾವದ ಪರಿಪೂರ್ಣತೆಯನ್ನು ಪಡೆದೇವು ಮತ್ತು ನಮಗೆ ಶಕ್ಯವಿರುವ ಪರಮೋಚ್ಚ ಆನಂದವನ್ನು ಕೂಡ ಸವಿದೇವು.

	ಆದರೆ ಈ ಪರಮಶ್ರೇಯದ ವಿಚಾರಗಳನ್ನು ಆಧುನಿಕ ತತ್ತ್ವಶಾಸ್ತ್ರಕಾರರು ಒಪ್ಪದೆ ಇರಲು ಅವುಗಳ ಹಿಂದೆ ಅಡಗಿರುವ ಪರಾತತ್ತ್ವದ ಅಂಶಗಳೇ ಕಾರಣವೆನ್ನಬಹುದು. ಪರಮಶ್ರೇಯವೊಂದನ್ನು ಒಪ್ಪದವರು ಕೂಡ ಮೌಲಿಕಶ್ರೇಯಗಳ ನಿರ್ಣಯವನ್ನೂ ಅವುಗಳಲ್ಲಿ ಗುಣಮಟ್ಟದ ತಾರತಮ್ಯದ ಸಮಸ್ಯೆಯನ್ನು ಕೈಬಿಡುವಂತಿಲ್ಲ. ಯಾವ ಮಾನವನೇ ಆಗಲಿ ಅಪೇಕ್ಷಿತ ಶ್ರೇಯಗಳನ್ನೆಲ್ಲ ಏಕಕಾಲದಲ್ಲಿಯೇ ಸಾಧಿಸಲಾರ. ಆದ್ದರಿಂದ ಅವನು ಅವುಗಳಲ್ಲಿ ಮೇಲು-ಕೀಳುಗಳ ತಾರತಮ್ಯವನ್ನು ಕಲ್ಪಿಸಲೇಬೇಕಾಗುತ್ತದೆ. ಹೀಗೆ ಕಲ್ಪಿಸಲು, ಪರಮಶ್ರೇಯವನ್ನು ಅಂಗೀಕರಿಸದವರು ಬೇರಾವ ಮಾನದಂಡವನ್ನು ಹುಡುಕಿಕೊಡುವರೋ ಎಂಬುದು ಸಂಶಯಾಸ್ಪದ. ಆದ್ದರಿಂದ ಪರಮಶ್ರೆಯದ ಕಲ್ಪನೆ ಸುತರಾಂ ಅಮಾನ್ಯವೆನ್ನುವಂತಿಲ್ಲ.

	ಬೆನ್‍ತಮ್ ಇಂಥ ಮಾನದಂಡವನ್ನು ವೈಷಯಿಕ ಸಂತೃಪ್ತಿಯಲ್ಲಿ ತೋರಿಸಲು ಮುಂದಾದ. ಆದರೆ ಜೆ.ಎಸ್.ಮಿಲ್ ಎತ್ತಿ ತೋರಿಸಿದಂತೆ ಅದರಲ್ಲಿ ತರ್ಕದೋಷಗಳಿವೆ. ಅದನ್ನೊಪ್ಪಿದರೆ ಒಂದು ಸಂತೃಪ್ತ ಹೊಂದಿ ಒಬ್ಬ ಅತೃಪ್ತ ಸಾಕ್ರಟೀಸನಿಗಿಂತ ಉತ್ತಮವೆನಿಸುವ ಅವಕಾಶ ಒದಗಿಬಂದಂತಾಗುತ್ತದೆ. ಪ್ರಾಣಿಮಟ್ಟದಲ್ಲಿ ಅತೃಪ್ತನಾದ ಸಾಕ್ರಟೀಸನಿಗೂ ವೈಚಾರಿಕ ಮಟ್ಟದಲ್ಲಿ ಮೇಲ್ದರ್ಜೆಯ ಸಂತೃಪ್ತಿ ಗಳಿಸಿರಬಹುದೆಂಬುದನ್ನು ಮರೆಯುವಂತಿಲ್ಲ. ಅಲ್ಲದೆ ಸಂತೃಪ್ತಿಯ ಪರಿಮಾಣವನ್ನು ಅಳೆಯಲು ನಮಗೆ ಯಾವ ಸಾಧನವೂ ಇಲ್ಲ. ಎರಡೂ ಶ್ರೇಯಗಳ ಅನುಭವವುಳ್ಳಾತ ಯಾವುದನ್ನು ಹೆಚ್ಚಿನದೆಂದು ಆಯ್ದುಕೊಳ್ಳುವನೋ ಅದೇ ಗುಣಮಟ್ಟದಲ್ಲಿ ಹೆಚ್ಚು ಉತ್ತಮವೆನ್ನಬೇಕೆಂಬ ಮಿಲ್ಲನ ಸೂಚನೆ ಕೂಡ ಮನುಷ್ಯರಿಗೆ ಗುಣಮಟ್ಟವನ್ನಳೆಯುವ ವಿಶೇಷಶಕ್ತಿಯಿದೆಯೆಂದು ಗೃಹೀತ ಹಿಡಿಯುವುದರಿಂದ ಸರ್ವಸಾಮಾನ್ಯವಾಗಲಾರದು.

	ನೀತಿಶಾಸ್ತ್ರದಲ್ಲಿ ಸದಾಚಾರಕ್ಕೆ ಮೂಲವನ್ನು ನಿರ್ಧರಿಸುವ ಸಮಸ್ಯೆ ಬೃಹದಾಕಾರವಾಗಿದ್ದು. ಅದರಲ್ಲಿ ದೇವರ ಅಸ್ತಿತ್ವವನ್ನಾಧರಿಸಿ ಹೇಳುವ ಪರಿಹಾರಗಳಿಗೆ ಎಂದಿನಿಂದಲೂ ಪ್ರಮುಖ ಸ್ಥಾನವಿದೆ. ನಮಗೆ ಯಾವ ಶ್ರೇಯದ ಅನುಭವವೇ ಬರಲಿ ಅದು ಪರಮಶ್ರೇಯದ ಸಮಕ್ಕೆ ಎಂದೂ ಬರಲಾಗದು ಮತ್ತು ಪರಮಶ್ರೇಯವನ್ನು ಸಾಧಿಸುವುದೇ ಮಾನವಜನ್ಮಕ್ಕೆ ಸಾಫಲ್ಯವೆಂದೂಪ್ಪಲೇಬೇಕು. ಆದ್ದರಿಂದ ದೇವರ ನಿಯಾಮಕವೇ ಹೀಗೆ ಎಂಬುದು ಈ ವಾದಗಳ ಸುಲಭರೂಪ. ಇದನ್ನು ಪರಿಷ್ಕøತ ರೂಪದಲ್ಲಿ ಮೊದಲು ಹೇಳಿದ ಕೀರ್ತಿ ಕಾಂಟನದು. ಪರಮ ಶ್ರೇಯದ ಕಲ್ಪನೆ ಮಾನವನ ಬುದ್ಧಿಯಿಂದ ಪರಿಹೃತವಾಗದಂತಿದೆ ; ಆದರೂ ಅವನ ಆತ್ಮದಲ್ಲಿ ಈ ಗುರಿಯನ್ನು ಸಾಧಿಸಬೇಕೆಂಬ ಕರ್ತವ್ಯಪ್ರಜ್ಞೆ ಜಾಗೃತವಾಗಿದೆ. ಆದ್ದರಿಂದ ಈ ನೀತಿನಿಯಾಮಕನಾದ ಜಗದೀಶನೊಬ್ಬನ ಅಸ್ತಿತ್ವ ಹಾಗೂ ವ್ಯವಸ್ಥಿತ ಸಹಕಾರವನ್ನು ನಂಬಿಕೊಂಡೇ ಆತ ಗುರಿಯತ್ತ ಸಾಗಬೇಕಾಗುತ್ತದೆ-ಎಂದು ಅವನ ತೀರ್ಮಾನ. ಕಾಂಟ್ ಧಾರ್ಮಿಕ ಆಚರಣೆಗಳಿಗೆ ಬೆಂಬಲವೀಯಲೇಂದೇನೂ ಹೀಗೆ ಬರೆದಿಲ್ಲ. ಪರಮಶ್ರೇಯವನ್ನು ಸಾಧಿಸಬೇಕೆಂಬುದು ಮಾನವನಿಗೆ ನಿರ್ಧಾರಪೂರ್ಣವಿಧಿ-ಎಂಬ ಅವನ ತತ್ತ್ವಕ್ಕೆ ಅವನ ವಿಚಾರಪ್ರಜ್ಞೆಯೇ ನಿಜವಾದ ಕಾರಣ. ಕಾಟ್ ಈ ವಾದವನ್ನು ತಾನು ಸಾಯುವ ಮುನ್ನ ಹಿಂತೆಗೆದುಕೊಂಡನೆಂಬ ವಾದವನ್ನು ನಿರಾಕರಿಸಿರುವವರೂ (ಶ್ರೇಡರ್ ಇತ್ಯಾದಿ) ಇದ್ದಾರೆ. ಆದರೂ ಬಹುತೇಕ ಮನುಷ್ಯರಲ್ಲಿ ಈ ನಿರ್ಧಾರಪೂರ್ಣ ವಿಧಿ ಅಥವಾ ಕರ್ತವ್ಯಪ್ರಜ್ಞೆಯೇ ಇಲ್ಲವೆಂದು ವಾದಿಸಿದರೆ ಈ ವಾದ ಖಂಡನೆಗೊಳಗಾಗುತ್ತದೆ.

	ಬೇರಾವ ರೀತಿಯಲ್ಲಿಯೂ ಬಿಡಿಸಲಾಗದ ನೀತಿಪ್ರವೃತ್ತಿಯ ನಿಯಾಮಕದ ಸಮಸ್ಯೆಯನ್ನು ಬಿಡಿಸಲು ದೇವರನ್ನೂ ಆತ್ಮದ ಅಮರತ್ವವನ್ನೂ ಕಲ್ಪಿಸಲಾಗುತ್ತದೆ. ಆದರೆ ನಿಜವಾಗಿ ಈ ಕಲ್ಪನೆ ಸಮಸ್ಯೆಯನ್ನು ಬಿಡಿಸಿದೆಯೆ? ರಹಸ್ಯವನ್ನು ಭೇದಿಸಿದೆಯೇ? ಅಥವಾ ತಾನೇ ಇನ್ನೊಂದು ರಹಸ್ಯವಾಗಿ ಪರಿಣಮಿಸಿದೆಯೆ? ಸಮಸ್ಯೆಯನ್ನು ಇನ್ನಷ್ಟು ಜಟಿಲತರವಾಗಿ ಮಾಡಿದೆಯೇ? ಸ್ವಾತಂತ್ರ್ಯ, ಸರ್ವಾಧಿಕಾರ, ಸ್ವಾಯತ್ತತೆಗಳು ನೀತಿ-ವರ್ತನೆಯಲ್ಲಿ ಉದ್ಯುಕ್ತವಾದವನಿಗೆ ಇಹದಲ್ಲಿ ಹೇಗೆ ಅತ್ಯವಶ್ಯವೋ ಹಾಗೆಯೇ ಪರದಲ್ಲೀಯೂ ಎಂದಾದರೆ ದೇವರ ಮತ್ತು ಅಮರತ್ವದ ಗುರಿಗಳು ಸಾಧಿತವಾಗದೆಯೇ ಉಳಿಯುವ ಶಕ್ಯತೆ ತಪ್ಪಲಾರದು. ಹೀಗೆ ಕಾಂಟ್‍ನ ಕಾಲಮೀಮಾಂಸೆ ಅವನ ದೇವಾಸ್ತಿತ್ವವಾದಕ್ಕೆ ಬಾಧಕವು ಆಗಬಹುದಾಗಿದೆ.

	ಕಾಂಟನ ವಾದವನ್ನೇ ಸುಧಾರಿಸಿ ಬೇರೆ ರೂಪಗಳಲ್ಲಿ ಪುನರ್ನಿರೂಪಿಸದವರೆಂದರೆ ಡಬ್ಲ್ಯು. ಆರ್. ಸೋರ್ಲಿ ಮತ್ತು ಎ.ಇ. ಟೇಲರ್. ಅವರು ನಮ್ಮ ಸದಾಚಾರಕ್ಕೆಲ್ಲ ದೇವರ ಅಸ್ತಿತ್ವವೇ ಏಕೈಕ ಕಾರಣವೆನ್ನುವುದಿಲ್ಲ . ಆದರೂ ಅದಿಲ್ಲದೆ ಸದಾಚಾರ ಪೂರ್ಣಸಾರ್ಥಕ್ಯ ಸಿದ್ದವಾಗದೆನ್ನುತ್ತಾರೆ. ನಮ್ಮ ಜಗತ್ತಿನಲ್ಲಿ ಸುಖದ ಅಭಾವವೇ ಈಗಲೂ ಹೆಚ್ಚಾಗಿ ಗೋಚರಕ್ಕೆ ಬರುತ್ತದೆ. ಸುಖವೊಂದೇ ಮಾನವನ ಮೌಲ್ಯವಾಗಿದ್ದರೆ ಜಗತ್ತಿನ ಇತಿಹಾಸದಲ್ಲಿ ಇಂದೂ ಇಷ್ಟೊಂದು ಸುಖಾಭಾವವಿದ್ದರೂ ಶಾಶ್ವತ ನೀತಿಮತ್ತೆಯ ಪ್ರವೃತ್ತಿಗಳಿರುತ್ತಿರಲಿಲ್ಲ. ಆದ್ದರಿಂದ ನಮ್ಮ ಬುದ್ಧಿಗೆ ಒಪ್ಪಿಗೆಯಾಗಲಿ. ಆಗದಿರಲಿ, ಶಾಶ್ವತ ಮೌಲ್ಯಗಳ ನಿಯಾಮಕನಾಗಿ ದೇವರನ್ನೊಪ್ಪಲೇಬೇಕೆಂದು ಸೋರ್ಲಿಯವಾದ.

	ಎ.ಇ. ಟೇಲರ್ ಹೇಳುವ ಪ್ರಕಾರ, ನೀತಿಪರ ಜೀವನ ಕೇವಲ ನಿಯತ ತತ್ತ್ವಗಳ ಅನುವರ್ತನೆಯಷ್ಟೇ ಆಗಿರದೆ. ಆತ್ಮೋನ್ನತಿಯ ಸ್ತರಗಳಿಗೆ ದಿಗ್ದರ್ಶನ ಮಾಡುವುದೂ ಆಗಿರುತ್ತದೆ. ನಾವು ಮುಂದುವರಿದಂತೆ ನಮ್ಮ ಮುಂದಿನ ಗುರಿ ಮಾರ್ಪಡುತ್ತ ಹೋಗುವುದನ್ನು ನೋಡುತ್ತೇವೆ. ನಾವು ಹೆಚ್ಚು ಹೆಚ್ಚು ಮುಂದುವರಿದಷ್ಟೂ ಕೇವಲ ಇಹದಲ್ಲಿ ಮಾನವಶ್ರೇಯವನ್ನೆಲ್ಲ ನಾವು ಸಾಧಿಸಲಾರೆವೆಂಬ ಭಾವನೆ ಬೆಳೆಯುತ್ತದೆ. ಕಾಲದ ಬಂಧನವಂತೂ ತಪ್ಪಿದ್ದಲ್ಲ. ಆದ್ದರಿಂದ ಇವುಗಳೆಲ್ಲಕೂ ಸರಿಯಾದ ಪರಿಹಾರ ದೊರೆಯಲು ದೇವರ ಅಸ್ತಿತ್ವವೊಂದೇ ಅತ್ಯಂತ ಯಶಸ್ವಿಯಾದ ಸಿದ್ದಾಂತ.

	ಆದರೆ ಸಿ.ಡಿ. ಬ್ರಾಡ್ ಮುಂತಾದವರು ಟೇಲರನ ವಾದದಲ್ಲಿಯೂ ದೋಷಗಳನ್ನು ತೋರಿಸಿದ್ದಾರೆ. ಟೇಲರ್ ಹೇಳುವ ನೀತಿಜೀವನದ ಗುರಿಗಳಲ್ಲಿ ಮೊದಲೇ ದೇವರ ಅಸ್ತಿತ್ವದ ಪೂರ್ವಗ್ರಹ ಸೇರಿಹೋಗಿದೆಯೆಂದು ಬ್ರಾಡ್ ಆಕ್ಷೇಪಿಸಿದ್ದಾನೆ. ಮೌಲ್ಯನಿರ್ಣಯಗಳು-ದೇವರ ವಿಷಯದಲ್ಲಿ ಅಸ್ತಿಕತೆ ಇವುಗಳಲ್ಲಿ ಮೊದಲು ಇದೋ ಅದೋ ಎಂಬ ಪೂರ್ವಾಪರದ ಸಂಶಯ ತಪ್ಪುವಂತಿಲ್ಲ.

	ಷ್ಲೇರ್ ಮಾಕರ್ ಎಂಬ ತತ್ತ್ವಜ್ಞನ ಸಿದ್ಧಾಂತದಲ್ಲಿ ಕಾಂಟನ ಕೆಲವು ದೋಷಗಳನ್ನು ತಪ್ಪಿಸಿ. ಸದಾಚಾರಕ್ಕೆ ದೇವಮೂಲವನ್ನು ಮತ್ತೊಂದು ರೀತಿಯಲ್ಲಿ ಸಾಧಿಸುವ ಯತ್ನವಿದೆ. ಕಾಲದೇಶನಿಯಮಿತವಾದ ಮನಸ್ಸು. ಬುದ್ಧಿಗಳಷ್ಟೇ ಮಾನವಲ್ಲ, ಬಾಹ್ಯ ರೂಪ ಕ್ರಿಯೆಗಳಿಂದ ಮಾನವವ್ಯಕ್ತಿಗಳು ಬೇರೆಯಾಗಿರುವಂತೆಯೇ ಒಂದು ಅಂತರ ಆತ್ಮೀಯ ಸ್ವರೂಪದಿಂದಲೂ ಬೇರೆಯಾಗಿರುತ್ತಾನೆ. ಭಾವನೆ, ಚಿಂತನೆ, ಕ್ರಿಯೆ ಇವು ಮೂರು ವಿಭಾಜಕ ಧರ್ಮಗಳು. ಆತ್ಮಭಾವನೆ ಪರಿಪುಷ್ಟವಾದ ಮಾನವನಿಂದ ಯಾವ ಸಹಜೀವನದ ಪರಿಷ್ಕøತಿಯೂ ಸಾಧ್ಯವಾಗದು. ಸಕಲರಿಗೂ ಹೆಚ್ಚಿನ ಪರಮ ಶ್ರೇಯವನ್ನು ಅಂಥವ ಸಾಧಿಸಲಾರ. ಆಧ್ಯಾತ್ಮಿಕ ಜೀವನವಿಲ್ಲದವ ಬಾಹ್ಯಜೀವಿಗಳ ಜಡ ಪ್ರತಿಬಿಂಬದಂತಿರುವನೇ ಹೊರತು. ಸಕಲಜೀವರ ಜೀವನವನ್ನು ಲೇಸಿಗೊಯ್ಯುವವ ಎಂದಿಗೂ ಆಗಲಾರ. ಆದ್ದರಿಂದ ಆಧ್ಯಾತ್ಮಿಕ ಪರಿಜ್ಞಾನದ ಉನ್ನತ ಅಭಿವ್ಯಕ್ತಿಯೇ ಧಾರ್ಮಿಕ ಮನೋವೃತ್ತಿಯೆಂಬುದು ಅವನ ವಿವರಣೆ.

	ಭಾರತೀಯ ವೇದಾಂತಿಗಳು ಕೂಡ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ಅಥವಾ ಆತ್ಮಜ್ಞಾನಕ್ಕೆ ಅಭೂತಪೂರ್ವವಾದ ಪ್ರಾಧಾನ್ಯ ಕೊಡುತ್ತಾರೆ. ಬುದ್ಧ, ಶಂಕರ, ಮುಂತಾದ ಜ್ಞಾನಿಗಳು ತಮ್ಮ ಆತ್ಮಾನುಭವ ದೇಶಕಾಲಾತೀತವಾದ ಅಖಂಡ, ಅನಂತ ಅನಂದಾನುಭವವೆಂದೇ ಭಾವಿಸುತ್ತಿದ್ದುದನ್ನು ನೊಡುತ್ತೇವೆ. ಯೋಗಶಾಸ್ತ್ರವಂತೂ ಆತ್ಮಾನುಭವದ ನಿರ್ವಿಕಲ್ಪಕ ಸಮಾಧಿ ಸ್ಥಿತಿಯನ್ನು ತುಂಬ ಮಾರ್ಮಿಕವಾಗಿ ಹಾಗೂ ಕ್ರಮಪೂರ್ವಕವಾಗಿ ವಿವರಿಸುತ್ತದೆ. ತತ್‍ತ್ವಮಸಿ, ಅಹಂಬ್ರಹ್ಮಾಸ್ಮಿ, ಸರ್ವಂ ಖಿಲ್ವಿದಂ ಬ್ರಹ್ಮ ಎಂಬ ಉಪನಿಷತ್ತಿನ ಮಹಾವಾಕ್ಯಗಳು ಪ್ರಸಿದ್ಧವಾಗಿವೆ. ಭೇದಜ್ಞಾನ ಶೂನ್ಯವಾಗಿ ಅಖಂಡ ಸಚ್ಚಿದಾನಂದ ಅನುಭವ ಇಹಜೀವನದಲ್ಲೇ ಸಾಧ್ಯವೆಂದೂ ಅದೇ ಜೀವನ್ಮುಕ್ತನ ಲಕ್ಷಣವೆಂದೂ ಅದ್ವೈತ ವೇದಾಂತ ಸಾರಿಹೇಳುತ್ತದೆ. ಬೃಹದಾರಣ್ಯಕ-ಛಾಂದೋಗ್ಯ ಉಪನಿಷತ್ತುಗಳಲ್ಲಿ ಈ ಬ್ರಹ್ಮವಾದದ ಪೂರ್ಣವಿವರಣೆ ದೊರೆಯುತ್ತದೆ. ಈ ಅನುಭವ ಸತ್ಯವೆಂಬುದನ್ನು ರಾಮಕೃಷ್ಣಪರಮಹಂಸ ಸ್ವಾಮಿವಿವೇಕಾನಂದ, ಅರವಿಂದ, ರಮಣಮಹರ್ಷಿ ಮುಂತಾದ ಈಚಿನ ಮಹಾತ್ಮರೂ ಜ್ಞಾನೇಶ್ವರ ಕಬೀರ ಮುಂತಾದ ಹಲವಾರು ಸಾಧುಸಂತರೂ ಏಕಕಂಠದಿಂದ ಪ್ರಶಂಸೆ ಮಾಡಿದ್ದಾರೆ.

	ಜೈನರಲ್ಲಿ ಕೂಡ ತೀರ್ಥಂಕರರೆಲ್ಲರೂ ಸಂಸಾರದ ಕರ್ಮಬಂಧನದಿಂದ ಮುಕ್ತರಾಗಿ ಊಧ್ರ್ವಮುಖ ಚೇತನರಾಗಿ ಉತ್ಕಾಂತಿ ಪಡೆಯುತ್ತಿದ್ದರೆಂದೇ ತಿಳಿಯಲಾಗುತ್ತದೆ. ಪರಮ ಸುಜ್ಞಾನದ ಪ್ರಕಾಶ ಕೋಟಿಚಂದ್ರಾದಿತ್ಯರ ಬೆಳಕಿಗಿಂತ ಮಿಗಿಲಾದುದೆಂಬ ವರ್ಣನೆಗಳಿವೆ. ಅವರಲ್ಲಿಯೂ ತಪ, ಯಮ, ನಿಯಮಾದಿಗಳಿಗೆ ಹೆಚ್ಚಿನ ಗೌರವವಿದೆ.

	ಭಗವಾನ್ ಬುದ್ಧ ಬೋಧಿವೃಕ್ಷದ ಕೆಳಗೆ ಕುಳಿತು ಪಡೆದ ಮಹಾಜ್ಞಾನ ಹಾಗು ಅನುಭವಗಳ ವರ್ಣನೆ ಸಾಹಿತ್ಯದಲ್ಲಿದೆ. ಮೊದಲ ರಾತ್ರಿ ಅವನಿಗೆ ತನ್ನ ಪೂರ್ವಜನ್ಮಗಳೆಲ್ಲವುಗಳ ಸ್ಮರಣೆಯುಂಟಾಯಿತಂತೆ. ಎರಡನೆಯ ರಾತ್ರಿ ದಿವ್ಯಚಕ್ಷು ತೆರೆಯಿತಂತೆ, ಅದರಿಂದ ಜಗತ್ತಿನ ಸಮಗ್ರ ನೋಟ ಲಬಿಸಿತು. ಮೂರನೆಯ ರಾತ್ರಿ ಸಂಸಾರದ ಮೂಲವೆಲ್ಲ ಅಜ್ಞಾನವೇ ಎಂಬ ಅರಿವಾಯಿತಂತೆ. ಇವುಗಳಿಂದ ಮುಕ್ತಿಯೇ ಪರಮಶ್ರೇಯವೆಂಬ ಜ್ಞಾನ ಉದಿಸಿತು. ನಾಲ್ಕನೆಯ ರಾತ್ರಿ ಧ್ಯಾನಗಳ ನಾನಾಸ್ತರಗಳ ಅನುಭವ ಬಂತು. ಪರಮ ಶಾಂತಿ ಮೂಡಿತು. ಕಡೆಗೆ ನಿಶ್ಚಲ ನಿರ್ವಾಣ ಅವನದಾಯಿತು. ಹೀಗೆ ಆತ್ಮಜ್ಞಾನ ಭಾರತೀಯ ತತ್ತ್ವಜ್ಞಾನದೆಲ್ಲೆಲ್ಲ ಪರಮಶ್ರೇಯವೆಂದು ನಿರ್ವಿವಾದವಾಗಿ ಎಲ್ಲರಿಂದಲೂ ಅಂಗೀಕೃತವಾಗಿದೆ. ಇದರಿಂದಲೇ ಪುನರ್ಜನ್ಮದ ಅಂತ್ಯವೆಂಬ ಭಾವನೆಯೂ ಸಮಾನವಾಗಿದೆ.

	ಜ್ಞಾನಿ ಬ್ರಹ್ಮಸಾಕ್ಷಾತ್ಕಾರ ಪಡೆಯವನೆಂಬುದನ್ನು ಭಗವದ್ಗೀತೆಯಲ್ಲಿ ಸ್ಪಷ್ಟವಾಗಿ ವರ್ಣಿಸಲಾಗಿದೆ. ಆದರೂ ಪ್ರಥಮತಃ ಇಲ್ಲಿ ನಿಷ್ಕಾಮಕರ್ಮ ಮತ್ತು ಭಕ್ತಿಗಳ ಮಹತ್ತ್ವವನ್ನು ಎತ್ತಿ ತೋರಿಸಲಾಗಿದೆ. ಮುಂದೆ ವೈಷ್ಣವ ಅಚಾರ್ಯರೆಲ್ಲ ರಾಮಾನುಜ, ಮಧ್ವ, ವಲ್ಲಭ, ಚೈತನ್ಯ ಇತ್ಯಾದಿ-ಭಕ್ತಿಯೋಗದ ಹಿರಿಮೆಯನ್ನೇ ಎತ್ತಿಹಿಡಿದುದರ ಫಲವಾಗಿ ಪ್ರರಮಶ್ರೇಯ ಅಥವಾ ಮುಕ್ತಿಯೆಂದರೆ ನಿರ್ಗುಣಬ್ರಹ್ಮ ಸಾಕ್ಷಾತ್ಕಾರವೆಂಬ ಅಭಿಪ್ರಾಯಕ್ಕೆ ಬದಲಾಗಿ, ಸಾಯುಜ್ಯ. ಸಾಲೋಕ್ಯ, ಸಾಮರಸ್ಯ ಮುಂತಾದ ಬೇರೆ ಬೇರೆ ಸಿದ್ದಾಂತಗಳು ನೆಲೆಯೂರಿದವು. ಭಕ್ತಿಭಾವದ ಅಭಿವ್ಯಕ್ತಿಯಲ್ಲಿ ಶ್ರವಣ, ಕೀರ್ತನ, ಸೇವನ ಮುಂತಾದ ನಾನಾಪ್ರಕಾರಗಳೂ ಜನಪ್ರಿಯವಾದುವು. ರಾಧಾಕೃಷ್ಣರ ಮಧುರಭಾವ ಅಥವಾ ಪ್ರೇಮ ದಿವ್ಯಭಕ್ತಿಯ ಪ್ರಕಾರಭೇದವೆಂದೆ ಪರಿಗಣಿತವಾಯಿತು. ಹೀಗೆ ತತ್ತ್ವಶಾಸ್ತ್ರ ಪುರಾಣೋಕ್ತ ಧಾರ್ಮಿಕ ಭಕ್ತಪಂಥಗಳ ಮೂಲತತ್ತ್ವವಾದ ದೇವರ ವಿಷಯಕ್ಕೆ ವಿಚಾರದ ನೆರವನ್ನು ನೀಡಿ. ಎರಡೂ ಅಭಿನ್ನವೆನಿಸುವಂತೆ ವಿಕಾಸಗೊಂಡುದು ಭಾರತೀಯ ವೇದಾಂತ ಇತಿಹಾಸವಾಗಿದೆ.							(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ